ಸಾಮಾಜಿಕ ದೂರ
	ಮಾನವ ಸಮಾಜದಲ್ಲಿ ಕಂಡು ಬರುವ ವಿವಿಧ ಸಾಮಾಜಿಕ ಗುಂಪುಗಳ ನಡುವೆ ಆಚರಣೆಯಲ್ಲಿರುವ ಪ್ರತ್ಯೇಕತೆ ಅಥವಾ ಅಂತರ (ಸೋಷಿಯಲ್ ಡಿಸ್ಟೆನ್ಸ್). ಸಮಾಜಶಾಸ್ತ್ರಜ್ಞರಾದ ಪಾರ್ಕ್ ಮತ್ತು ಬರ್ಗೆಸ್ ಪರಿಚಯಿಸಿದ ಈ ಪರಿಕಲ್ಪನೆ ವರ್ಗ ಸಂಬಂಧ ಗಳ ಸ್ವರೂಪವನ್ನು ವಿವರಿಸುವಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ.

	ಸಾಮಾಜಿಕ ಸಮೂಹ, ವರ್ಗ ಅಥವಾ ಗುಂಪುಗಳ ನಡುವೆ ಎಲ್ಲ ಸಮಾಜಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇದು ಕಂಡು ಬರುತ್ತದೆ. ತೀವ್ರವಾಗಿ ಸ್ಥಿರೀಕೃತವಾದ ಸಮಾಜಗಳಲ್ಲಿ ಇದರ ಪ್ರಮಾಣ ಹಾಗೂ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ, ವರ್ಗ ಅಥವಾ ಜನಾಂಗೀಯ ಪ್ರಜ್ಞೆ ಹೆಚ್ಚುತ್ತ ಹೋದಂತೆ ಈ ಗುಂಪುಗಳ ನಡುವಿನ ಸಾಮಾಜಿಕ ಅಂತರವೂ ಹೆಚ್ಚುತ್ತಾ ಹೋಗುತ್ತದೆ. ವಿವಿಧ ಸಾಮಾಜಿಕ ಸಂದರ್ಭಗಳಲ್ಲಿ ಯಾರೊಡನೆ ಬೆರೆಯಬಹುದು ಅಥವಾ ಯಾರಿಂದ ದೂರವಿರಬೇಕು ಎಂದು ವ್ಯಕ್ತಿಗಳು ಅಥವಾ ಗುಂಪುಗಳು ನಿರ್ಧರಿಸಲಾ ರಂಭಿಸುವುದರ ಮೂಲಕ ಇದರ ಆಚರಣೆ ಪ್ರಾರಂಭವಾಗುತ್ತದೆ. ಆಹಾರ ಸ್ವೀಕಾರ, ವಿವಾಹ ಸಂಬಂಧಗಳನ್ನು ಏರ್ಪಡಿಸುವುದು ಅಥವಾ ಗೆಳೆಯರ ಬಳಗಗಳಲ್ಲಿ ಸದಸ್ಯತ್ವ ನೀಡುವಿಕೆ ಅಥವಾ ನಿರಾಕರಣೆ ಈ ಸಂದರ್ಭಗ ಳಲ್ಲಿ ಹೆಸರಿಸಬಹುದಾದಂಥವು ವಿವಿಧ ಸನ್ನಿವೇಶಗಳಲ್ಲಿ ಯಾರು ಯಾರನ್ನು ಸಂಗಾತಿಗಳಾಗಿ ಹೊಂದ ಬಯಸುತ್ತಾರೆ ಅಥವಾ ಯಾರಿಂದ ದೂರವಿರಲು ಇಚ್ಛಿಸುತ್ತಾರೆ ಎಂಬುದನ್ನು ಅಳೆಯುವ ಸಾಮಾಜಿಕ ಅಂತರ ಮಾಪನವೊಂದನ್ನು ರಚಿಸಿದ ಬೊಗಾರ್ಡಸ್, ಇದನ್ನು ಪರಿಮಾಣಾತ್ಮಕ ವಿಶ್ಲೇಷಣೆಗೆ ಒಳಪಡಿಸಲು ಸಾಧ್ಯ ಎಂಬುದನ್ನು ತೋರಿಸಿದ. ವಿವಿಧ ಜನಾಂಗೀಯ ಹಾಗೂ ರಾಷ್ಟ್ರೀಯ ಗುಂಪುಗಳ ನಡುವಿನ ಸಾಮಾಜಿಕ ಸಂಬಂಧಗಳ ಸ್ವರೂಪವನ್ನು ಅಳೆಯಲು ಸಾಮಾಜಿಕ ಅಂತರ ಮಾಪನವನ್ನು ಈತ ಬಳಸಿದ್ದ.

	ಇದರ ಆಚರಣೆ ಕೆಲ ಸಮಾಜಗಳಲ್ಲಿ ಒಂದು ಸಾಂಸ್ಥಿಕ ರೂಪವನ್ನು ತಳೆಯುತ್ತದೆ. ಇದಕ್ಕೆ ಪ್ರಮುಖ ಉದಾಹರಣೆಗಳೆಂದರೆ ಭಾರತೀಯ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಜಾತಿ ಪದ್ಧತಿ ಮತ್ತು ದಕ್ಷಿಣ ಆಫ್ರಿಕದಲ್ಲಿ ಆಚರಣೆಯಲ್ಲಿರುವ ವರ್ಣ ಭೇದ ನೀತಿ. ಒಳ ಬಾಂಧವ್ಯ ವಿವಾಹ, ಪ್ರತ್ಯೇಕ ವಾಸಸ್ಥಳಗಳು, ಅಂತರ್‍ಸಂಬಂಧಗಳ ನಿಷೇಧ-ಇವೇ ಮುಂತಾದ ಆಚರಣೆಗಳಿಂದ ಇದು ಈ ಸಮಾಜಗಳಲ್ಲಿ ಒಂದು ಸ್ಥಾಪಿತ ವ್ಯವಸ್ಥೆಯಾಗಿ ರೂಪುಗೊಂಡಿದೆ.

	ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳ ಭಾವನೆಗಳು ಜಾಗೃತವಾಗುತ್ತಾ ಹೋದ ಹಾಗೆಲ್ಲ ಈ ಬಗ್ಗೆ ತೀವ್ರ ಸ್ವರೂಪದ ವಿರೋಧ ವ್ಯಕ್ತವಾಗುತ್ತದೆ. ಸಾಮಾಜಿಕ ಬದಲಾವಣೆಗಳ ಪ್ರಭಾವದಿಂದಾಗಿ ದೂರದ ತೀವ್ರತೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ಕಾನೂನು ಕ್ರಮಗಳು ಕಾಲದಿಂದ ಕಾಲಕ್ಕೆ ಸಮಾನತೆಯ ಕಲ್ಪನೆ ಸಾಕಾರವಾಗುವುದಕ್ಕೆ ಹೆಚ್ಚು ಒತ್ತು ನೀಡಿವೆ. ಹಾಗಿದ್ದರೂ ವ್ಯಕ್ತಿ ಮತ್ತು ಗುಂಪುಗಳ ನಡುವೆ ಇದು ಇಂದಿಗೂ ವಿವಿಧ ಸಮಾಜಗಳಲ್ಲಿ, ವಿವಿಧ ಸ್ವರೂಪಗಳಲ್ಲಿ ಹಾಗೂ ವಿವಿಧ ಪ್ರಮಾಣಗಳಲ್ಲಿ ಅಸ್ತಿತ್ವದಲ್ಲಿದೆ.									
		(ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ